ಒಂದು ಮಧ್ಯಾಹ್ನ ಊಟ ಮುಗಿಸಿ ಕಛೇರಿಗೆ ಹೋದೆ. ಮಧ್ಯಾಹ್ನದ ಆ ಸುಡುಬಿಸಿಲು ಕಛೇರಿಯ ಒಳಗೂ ವ್ಯಾಪಿಸಿತ್ತಾದರೂ ಕಟ್ಟಡ ಹಳೆಯದಾದ್ದರಿಂದಲೋ ಅಥವಾ ಬೃಹದಾಕಾರದ ಗೋಡೆಗಳಿದ್ದುದರಿಂದಲೋ ಒಳ ವಾತಾವರಣ ಕೊಂಚ ತಂಪಾಗಿತ್ತು.ನಾನು ಕುಳಿತುಕೊಳ್ಳುವ ಸ್ಥಳ ಕಿಟಕಿಯ ಬಳಿಯಿದ್ದು ಆ ಕಿಟಕಿಗೆ ಮೆಶ್ ಅಳವಡಿಸಲಾಗಿತ್ತು. ಆ ಮೆಶ್ ನ ಮೇಲ್ಭಾಗದಲ್ಲಿ ಒಂದು ಅಂಗೈ ಅಗಲದಷ್ಟು ರಂಧ್ರವಿತ್ತು. . ಇನ್ನೇನು ಕೆಲಸ ಶುರುವಿಟ್ಟುಕೊಳ್ಳಬೇಕೆನ್ನುವಷ್ಟರಲ್ಲಿ ಕಿಟಕಿಯ ಬಳಿ ಏನೋ ಪಟಪಟನೆ ರೆಕ್ಕೆ ಬಡಿಯುತ್ತಿರುವ ಸದ್ದು. ಏನಿರಬಹುದೆಂದು ಕುತೂಹಲದಿಂದ ನೋಡಲಾಗಿ ಕಂಡದ್ದು ಹಲವು ಬಣ್ಣಗಳುಳ್ಳ ಸುಂದರವಾದ ಚಿಟ್ಟೆ. ಅದು ಕಿಟಕಿಯ ಮೆಶ್ ನಲ್ಲಿನ ರಂಧ್ರದಿಂದ ಒಳನುಸುಳಿರಬೇಕು. ಹೊರಹೋಗಲು ಹವಣಿಸುತ್ತಿದ್ದ ಆ ಚಿಟ್ಟೆಗೆ ಮುಂಬಾಗಿಲು ತೆರೆದಿದ್ದರೂ, ಹೆಚ್ಚು ಬೆಳಕು ಸೂಸುತ್ತಿದ್ದ ಆ ಕಿಟಕಿಯೇ ತನ್ನ ಹೊರಜಗತ್ತಿಗೆ ದಾರಿಯೆಂದು ಬಲವಾಗಿ ನಂಬಿದಂತಿತ್ತು. ಅದು ತಾನಾಗಿಯೇ ಹೊರಹೋಗುವುದೆಂದು ಭಾವಿಸಿ ಕೆಲಸದಲ್ಲಿ ನಿರತಳಾದೆ. ಆದರೆ ಸುಮಾರು ಹೊತ್ತು ಕಳೆದರೂ ಆ ಚಿಟ್ಟೆಗೆ ದಾರಿ ಕಾಣದೇ ಒಂದೇ ಸಮನೆ ಇಡೀ ಕಿಟಕಿಯ ತುಂಬೆಲ್ಲಾ ಹಾರಾಡುತ್ತಿತ್ತು. ಇದನ್ನು ಕಂಡ ನನಗೆ ಚಿಂತೆ ಶರುವಿಟ್ಟುಕೊಂಡಿತು. ನಾನೇ ಆ ಚಿಟ್ಟೆಯನ್ನು ಹಿಡಿದು ಹೊರಬಿಡಲು ಆ ರಂಧ್ರ, ನಾನು ಕುರ್ಚಿ ಅಥವಾ ಮೇಜು ಉಪಯೋಗಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಹಳೆಯ ಕಟ್ಟಡವಾದ್ದರಿಂದ ಕಿಟಕಿಯಲ್ಲಿನ ರಂಧ್ರ ನನ್ನ ಎತ್ತರಕ್ಕೆ ನಿಲುಕದಾಗಿತ್ತು. ಹೀಗೆ ಬಿಟ್ಟರೆ ಚಿಟ್ಟೆ ಸಾಯುವುದು ಖಂಡಿತವೆನಿಸಿತು. ನನ್ನ ಕೆಲವು ಸಹೋದ್ಯೋಗಿಗಳ ಗಮನವನ್ನು ಆ ಕಡೆ ಸೆಳೆಯಲು ಪ್ರಯತ್ನಿಸಿದೆ. ಅವರಿಗೆ ಇದು ಹಾಸ್ಯಾಸ್ಪದವೆನಿಸಿ ನಕ್ಕು ಸುಮ್ಮನಾದರೇ ಹೊರತು ಯಾರಿಗೂ ಆ ಚಿಟ್ಟೆಯ ಜೀವ ಜೀವವೆನಿಸಲಿಲ್ಲ. ದುಃಖ ಉಮ್ಮಳಿಸಿ ಬಂತು. ಕೆಲಸದಲ್ಲಿ ಮನಸ್ಸು ಮಗ್ನವಾಗಿಸಲು ಪ್ರಯತ್ನಿಸಿ ಸೋತೆ. ನನ್ನ ಅಸಹಾಯಕ ಸ್ಥಿತಿಗೆ ಅದೆಷ್ಟು ಹಳಿದುಕೊಂಡೆನೋ..! ಒಂದು ರೀತಿಯಲ್ಲಿ ಚಿಟ್ಟೆ ಮತ್ತು ನಾನು ಒಟ್ಟೊಟ್ಟಿಗೆ ಜೀವನ್ಮರಣದ ನಡುವೆ ತೊಯ್ದಾಡುತ್ತಿದ್ದೇವೇನೋ ಎಂಬಷ್ಟು ಯಾತನೆಯಾಯಿತು. ಇನ್ನು ಚಿಟ್ಟೆ ಸತ್ತಂತೆಯೇ ಎಂದು ಅದರ ಕಡೆಯೇ ತದೇಕಚಿತ್ತದಿಂದ ನೋಡತೊಡಗಿದೆ. ಅಷ್ಟರಲ್ಲಿ ನನ್ನ ಅದೃಷ್ಟವೋ ಅಥವಾ ಆ ಚಿಟ್ಟೆಯ ಅದೃಷ್ಟವೋ, ಕಛೇರಿಗೆ ಕೆಲಸದ ಮೇಲೆ ಬಂದಿದ್ದ ಗ್ರಾಮಸಹಾಯಕರೊಬ್ಬರು ನನ್ನ ಸ್ಥಿತಿಯನ್ನು ಕಂಡು ಕಾರಣ ತಿಳಿದು ಕೂಡಲೇ ಕಿಟಕಿಯ ಮೇಲೆ ಹತ್ತಿ ಚಿಟ್ಟೆಯನ್ನು ಮೆಶ್ ನಲ್ಲಿನ ರಂಧ್ರದ ಮೂಲಕ ಹೊರಬಿಟ್ಟರು. ಅವರಿಗೆ ಹೃದಯದುಂಬಿ ಥ್ಯಾಂಕ್ಸ್ ಹೇಳಿದೆ. ಅಂದು ಒಂದು ಚಿಟ್ಟೆಯ ಜೀವ ಉಳಿಸಿದ ಸಂತೃಪ್ತಿಯನ್ನು ನೆನೆದಾಗ ಇಂದಿಗೂ ನನ್ನ ಮುಖದಲ್ಲಿ ನೆಮ್ಮದಿಯ ಮುಗುಳ್ನಗು ಮೂಡುತ್ತದೆ.

No comments:
Post a Comment