ಸ್ವಲ್ಪ ಮರಕುಟುಕ ಪಕ್ಷಿಯನ್ನು ಹೋಲುವ ಈ ದೈತ್ಯ ಪಕ್ಷಿ ದಕ್ಷಿಣ ಮತ್ತು ದಕ್ಷಿಣ ಪೂರ್ವ ಏಷ್ಯಾ ಖಂಡಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರ ಸಂತಾನಾಭಿವೃದ್ಧಿಯದೊಂದು ಸೋಜಿಗದ ಕಥೆ. ಸಂತಾನೋತ್ಪತ್ತಿ ಸಮಯದಲ್ಲಿ ಗೂಡನ್ನು ಆಯ್ಕೆ ಮಾಡುವಲ್ಲಿ ಯಾವುದೇ ಆಸಕ್ತಿ ವಹಿಸದ ಗಂಡು ಪಕ್ಷಿ, ಹೆಣ್ಣು ಗೂಡನ್ನು ಆಯ್ಕೆ ಮಾಡಿ ಗೂಡಿನೊಳಹೊಕ್ಕು ಮೊಟ್ಟೆಗಳನ್ನಿಡುವ ಕಾಲಕ್ಕೆ, ಹೆಣ್ಣಿನ ಕೊಕ್ಕು ಮತ್ತು ಮುಂಬರುವ ಮರಿ ಹಕ್ಕಿಗಳ ಕೊಕ್ಕುಗಳು ಮಾತ್ರ ಹೊರಬರಲು ಅವಕಾಶ ಕಲ್ಪಿಸಿ ಇಡಿಯ ಗೂಡನ್ನು ಮಣ್ಣು, ಕಡ್ಡಿ, ಇನ್ನಿತರೆ ವಸ್ತುಗಳಿಂದ ಪೂರ್ತಿಯಾಗಿ ಮುಚ್ಚಿಬಿಡುತ್ತದೆ. ಗೂಡಿನಲ್ಲಿರುವ ಹಕ್ಕಿಗೆ ನಿತ್ಯವೂ ಆಹಾರ ಒದಗಿಸುವ ಜವಾಬ್ದಾರಿಯನ್ನು ಗಂಡು ಹಕ್ಕಿ ಹೊರುತ್ತದೆ. ಮರಿ ಹಕ್ಕಿಗಳು ರೆಕ್ಕೆ ಬಲಿತು ತಾಯಿಯೊಂದಿಗೆ ಮುಚ್ಚಿದ ಗೂಡನ್ನು ಒಡೆದು ಹೊರಬರುತ್ತದೆ.
Monday, December 29, 2014
ಗ್ರೇಟ್ ಇಂಡಿಯನ್ ಹಾರ್ನ್ ಬಿಲ್

ಮತ್ತೊಂದು ಚಿಟ್ಟೆಯ ಕಥೆ
ಒಂದು ಮಧ್ಯಾಹ್ನ ಊಟ ಮುಗಿಸಿ ಕಛೇರಿಗೆ ಹೋದೆ. ಮಧ್ಯಾಹ್ನದ ಆ ಸುಡುಬಿಸಿಲು ಕಛೇರಿಯ ಒಳಗೂ ವ್ಯಾಪಿಸಿತ್ತಾದರೂ ಕಟ್ಟಡ ಹಳೆಯದಾದ್ದರಿಂದಲೋ ಅಥವಾ ಬೃಹದಾಕಾರದ ಗೋಡೆಗಳಿದ್ದುದರಿಂದಲೋ ಒಳ ವಾತಾವರಣ ಕೊಂಚ ತಂಪಾಗಿತ್ತು.ನಾನು ಕುಳಿತುಕೊಳ್ಳುವ ಸ್ಥಳ ಕಿಟಕಿಯ ಬಳಿಯಿದ್ದು ಆ ಕಿಟಕಿಗೆ ಮೆಶ್ ಅಳವಡಿಸಲಾಗಿತ್ತು. ಆ ಮೆಶ್ ನ ಮೇಲ್ಭಾಗದಲ್ಲಿ ಒಂದು ಅಂಗೈ ಅಗಲದಷ್ಟು ರಂಧ್ರವಿತ್ತು. . ಇನ್ನೇನು ಕೆಲಸ ಶುರುವಿಟ್ಟುಕೊಳ್ಳಬೇಕೆನ್ನುವಷ್ಟರಲ್ಲಿ ಕಿಟಕಿಯ ಬಳಿ ಏನೋ ಪಟಪಟನೆ ರೆಕ್ಕೆ ಬಡಿಯುತ್ತಿರುವ ಸದ್ದು. ಏನಿರಬಹುದೆಂದು ಕುತೂಹಲದಿಂದ ನೋಡಲಾಗಿ ಕಂಡದ್ದು ಹಲವು ಬಣ್ಣಗಳುಳ್ಳ ಸುಂದರವಾದ ಚಿಟ್ಟೆ. ಅದು ಕಿಟಕಿಯ ಮೆಶ್ ನಲ್ಲಿನ ರಂಧ್ರದಿಂದ ಒಳನುಸುಳಿರಬೇಕು. ಹೊರಹೋಗಲು ಹವಣಿಸುತ್ತಿದ್ದ ಆ ಚಿಟ್ಟೆಗೆ ಮುಂಬಾಗಿಲು ತೆರೆದಿದ್ದರೂ, ಹೆಚ್ಚು ಬೆಳಕು ಸೂಸುತ್ತಿದ್ದ ಆ ಕಿಟಕಿಯೇ ತನ್ನ ಹೊರಜಗತ್ತಿಗೆ ದಾರಿಯೆಂದು ಬಲವಾಗಿ ನಂಬಿದಂತಿತ್ತು. ಅದು ತಾನಾಗಿಯೇ ಹೊರಹೋಗುವುದೆಂದು ಭಾವಿಸಿ ಕೆಲಸದಲ್ಲಿ ನಿರತಳಾದೆ. ಆದರೆ ಸುಮಾರು ಹೊತ್ತು ಕಳೆದರೂ ಆ ಚಿಟ್ಟೆಗೆ ದಾರಿ ಕಾಣದೇ ಒಂದೇ ಸಮನೆ ಇಡೀ ಕಿಟಕಿಯ ತುಂಬೆಲ್ಲಾ ಹಾರಾಡುತ್ತಿತ್ತು. ಇದನ್ನು ಕಂಡ ನನಗೆ ಚಿಂತೆ ಶರುವಿಟ್ಟುಕೊಂಡಿತು. ನಾನೇ ಆ ಚಿಟ್ಟೆಯನ್ನು ಹಿಡಿದು ಹೊರಬಿಡಲು ಆ ರಂಧ್ರ, ನಾನು ಕುರ್ಚಿ ಅಥವಾ ಮೇಜು ಉಪಯೋಗಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಹಳೆಯ ಕಟ್ಟಡವಾದ್ದರಿಂದ ಕಿಟಕಿಯಲ್ಲಿನ ರಂಧ್ರ ನನ್ನ ಎತ್ತರಕ್ಕೆ ನಿಲುಕದಾಗಿತ್ತು. ಹೀಗೆ ಬಿಟ್ಟರೆ ಚಿಟ್ಟೆ ಸಾಯುವುದು ಖಂಡಿತವೆನಿಸಿತು. ನನ್ನ ಕೆಲವು ಸಹೋದ್ಯೋಗಿಗಳ ಗಮನವನ್ನು ಆ ಕಡೆ ಸೆಳೆಯಲು ಪ್ರಯತ್ನಿಸಿದೆ. ಅವರಿಗೆ ಇದು ಹಾಸ್ಯಾಸ್ಪದವೆನಿಸಿ ನಕ್ಕು ಸುಮ್ಮನಾದರೇ ಹೊರತು ಯಾರಿಗೂ ಆ ಚಿಟ್ಟೆಯ ಜೀವ ಜೀವವೆನಿಸಲಿಲ್ಲ. ದುಃಖ ಉಮ್ಮಳಿಸಿ ಬಂತು. ಕೆಲಸದಲ್ಲಿ ಮನಸ್ಸು ಮಗ್ನವಾಗಿಸಲು ಪ್ರಯತ್ನಿಸಿ ಸೋತೆ. ನನ್ನ ಅಸಹಾಯಕ ಸ್ಥಿತಿಗೆ ಅದೆಷ್ಟು ಹಳಿದುಕೊಂಡೆನೋ..! ಒಂದು ರೀತಿಯಲ್ಲಿ ಚಿಟ್ಟೆ ಮತ್ತು ನಾನು ಒಟ್ಟೊಟ್ಟಿಗೆ ಜೀವನ್ಮರಣದ ನಡುವೆ ತೊಯ್ದಾಡುತ್ತಿದ್ದೇವೇನೋ ಎಂಬಷ್ಟು ಯಾತನೆಯಾಯಿತು. ಇನ್ನು ಚಿಟ್ಟೆ ಸತ್ತಂತೆಯೇ ಎಂದು ಅದರ ಕಡೆಯೇ ತದೇಕಚಿತ್ತದಿಂದ ನೋಡತೊಡಗಿದೆ. ಅಷ್ಟರಲ್ಲಿ ನನ್ನ ಅದೃಷ್ಟವೋ ಅಥವಾ ಆ ಚಿಟ್ಟೆಯ ಅದೃಷ್ಟವೋ, ಕಛೇರಿಗೆ ಕೆಲಸದ ಮೇಲೆ ಬಂದಿದ್ದ ಗ್ರಾಮಸಹಾಯಕರೊಬ್ಬರು ನನ್ನ ಸ್ಥಿತಿಯನ್ನು ಕಂಡು ಕಾರಣ ತಿಳಿದು ಕೂಡಲೇ ಕಿಟಕಿಯ ಮೇಲೆ ಹತ್ತಿ ಚಿಟ್ಟೆಯನ್ನು ಮೆಶ್ ನಲ್ಲಿನ ರಂಧ್ರದ ಮೂಲಕ ಹೊರಬಿಟ್ಟರು. ಅವರಿಗೆ ಹೃದಯದುಂಬಿ ಥ್ಯಾಂಕ್ಸ್ ಹೇಳಿದೆ. ಅಂದು ಒಂದು ಚಿಟ್ಟೆಯ ಜೀವ ಉಳಿಸಿದ ಸಂತೃಪ್ತಿಯನ್ನು ನೆನೆದಾಗ ಇಂದಿಗೂ ನನ್ನ ಮುಖದಲ್ಲಿ ನೆಮ್ಮದಿಯ ಮುಗುಳ್ನಗು ಮೂಡುತ್ತದೆ.
ಸಿಂಗಾಪುರ ಚೆರ್ರಿ
ಪಟ್ಟಣದಲ್ಲಿಯೇ ಹೆಚ್ಚಾಗಿ ಬೆಳೆದ ನನಗೆ ಮರಗಿಡಗಳ ಕುರಿತು ಅಷ್ಟೇನೂ ಅರಿವಿಲ್ಲ. ಜಮೀನು, ತೋಟ ಇಲ್ಲದೇ ಇರುವುದರಿಂದಲೂ ಈ ಬಗ್ಗೆ ತಿಳಿವಳಿಕೆ ತೀರಾ ಕಡಿಮೆ. ನೌಕರಿ ಸಿಕ್ಕ ನಂತರ ಸರ್ಕಾರಿ ವಸತಿ ಗೃಹಕ್ಕೆ ಸ್ಥಳಾಂತರ. ನಾವು ವಾಸಿಸುತ್ತಿದ್ದ ಬೀದಿಯಲ್ಲಿ ಒಂದು ಸಿಂಗಾಪುರ ಚೆರ್ರಿ ಹಣ್ಣಿನ ಮರವಿತ್ತು. ಪಕ್ಕದ ಮನೆಯ ಕಾಂಪೌಂಡಿನಲ್ಲಿಯೂ,ನನ್ನ ಕಛೇರಿಯ ಮುಂಭಾಗದಲ್ಲಿಯೂ ಹೀಗೆ ನಾಲ್ಕೈದು ಮರಗಳಿದ್ದವು. ಈ ಮರಗಳನ್ನು ಅಲ್ಲಿನ ಜನರು ಗಸಗಸೆ ಹಣ್ಣಿನ ಮರವೆಂದೇ ಭಾವಿಸಿದ್ದರು. ಅಲ್ಲಿಯವರೆವಿಗೂ ಕೇವಲ ಗಸಗಸೆ ಪಾಯಸ ಮಾತ್ರ ಕೇಳಿ ತಿಳಿದಿದ್ದ ನನಗೆ ಗಸಗಸೆ ಹಣ್ಣಿನ ಮರ, ಅದರ ಹಣ್ಣು ನೋಡಿ ಬಹಳ ಕುತೂಹಲವೂ ಆಶ್ಚರ್ಯವೂ ಆಯಿತು. ಆನಂತರ ತಿಳಿದು ಬಂದದ್ದೇನೆಂದರೆ ಅದರ ಹೆಸರು ಸಿಂಗಾಪುರ ಚೆರ್ರಿ ಎಂದು. ದೊಡ್ಡ ಮರವೂ ಅಲ್ಲದ ಕುಬ್ಜ ಗಿಡವೂ ಅಲ್ಲದ ಆ ಮರದ ತುಂಬ ಕೆಂಪು ಕೆಂಪು ಹಣ್ಣು. ಥೇಟ್ ಎಲಚಿ ಹಣ್ಣಿನಂತೆ ಗಾತ್ರ. ರುಚಿಯೂ ಅಷ್ಟೆ ಸ್ವಾದಿಷ್ಟ. ಹೆಚ್ಚು ತಿಂದಲ್ಲಿ ಶೀತವಾಗುತ್ತದೆಂಬ ಅಮ್ಮನ ಆತಂಕವನ್ನೂ ಲೆಕ್ಕಿಸದೆ ತಿಂದದ್ದಿದೆ. ನಮ್ಮ ಮನೆಯ ಮಕ್ಕಳೂ ಸೇರಿದಂತೆ ಹತ್ತಿರದಲ್ಲಿಯೇ ಇರುವ ಶಾಲೆಯ ಮಕ್ಕಳಿಗೂ ಇವೇ ಹಣ್ಣುಗಳೂ ಬೇಕು. ಆ ಮಕ್ಕಳು ಹಣ್ಣು ಕೀಳಲು ಮರ ಹತ್ತುವುದೇನು, ನನ್ನಮ್ಮ ಗದರುವುದೇನು..! ನೋಡಲು ತುಂಬಾ ಮಜವಾಗಿರುತ್ತಿತ್ತು.
ಇನ್ನು ಕಛೇರಿಯ ಬಳಿಯಿದ್ದ ಮರದ ನೆರಳಿನಡಿ ಅದೆಷ್ಟು ಬೈಕುಗಳು ನಿಲ್ಲುತ್ತಿದ್ದವು, ಅದೆಷ್ಟು ಜನ ತಮ್ಮ ದಣಿವಾರಿಸಿಕೊಳ್ಳಲು ಮರದಡಿ ಕೂರುತ್ತಿದ್ದರು..!ಇಷ್ಟೆಲ್ಲಾ ಸಾಲದೆಂಬಂತೆ ಆ ಮರಗಳ ರಸಭರಿತ ಹಣ್ಣುಗಳನ್ನು ತಿನ್ನಲು ಗಿಳಿ, ಮೈನಾ, ಗುಬ್ಬಚ್ಚಿ ಹೀಗೆ ತರಹೇವಾರಿ ಹಕ್ಕಿಗಳ ದಂಡೇ ಬರುತ್ತಿತ್ತು. ಅವುಗಳ ಕಲರವ ಕೇಳುವುದೇ ಒಂದು ಸೊಗಸಾಗಿತ್ತು. ಇದೆಲ್ಲದರ ಜೊತೆಗೆ ಎಲ್ಲಾ ಮರಗಳೂ ತಮ್ಮದೇ ಸ್ವಂತ ಎಂಬಂತೆ ದಾಳಿಯಿಡುತ್ತಿದ್ದ ಮಂಗಗಳ ಹಿಂಡು..!
ಹೀಗಿರುವಾಗ ನಮ್ಮ ಪಕ್ಕದ ಮನೆಯವರು ಸಂಪೊಂದನ್ನು ನಿರ್ಮಿಸಲು ಅವರ ಕಾಂಪೌಂಡಿನಲ್ಲಿದ್ದ ಈ ಹಣ್ಣಿನ ಮರವನ್ನು ಬುಡಸಮೇತ ಕಡಿಸಿದರು. ಮತ್ತೊಂದು ಮನೆಯವರು ತಾವು ಕೊಂಡ ಹತ್ತು ಲಕ್ಷದ ಕಾರನ್ನು ನಿಲ್ಲಿಸಲು ಚಪ್ಪರ ನಿರ್ಮಿಸುವ ಸಲುವಾಗಿ ಸೊಂಪಾಗಿ ಹರಡಿ ನಿಂತಿದ್ದ ಬೀದಿ ಬದಿಯ ಮರವನ್ನು ಕಡಿಸಿದರು. ಕಛೇರಿಯ ಬಳಿಯಿದ್ದ ಮರವನ್ನೂ ರಾತ್ರೋ ರಾತ್ರಿ ಯಾರೋ ಕಿಡಿಗೇಡಿಗಳು ಬುಡಸಮೇತ ಕತ್ತರಿಸಿ ಕದ್ದೊಯ್ದರು.
ಈಗ ಇಡೀ ಬೀದಿಯಲ್ಲಿ ಒಂದೂ ಸಿಂಗಾಪುರ ಚೆರ್ರಿ ಹಣ್ಣಿನ ಮರವಿಲ್ಲ, ಅದರ ನೆರಳಿಲ್ಲ,ಅದರ ಹಣ್ಣಿಲ್ಲ, ಹಕ್ಕಿಗಳಿಲ್ಲ, ಹಕ್ಕಿಗಳ ಕಲರವವಿಲ್ಲ, ಮಕ್ಕಳ ಸದ್ದಿಲ್ಲ, ಅಮ್ಮನ ಗದರಿಕೆಯಿಲ್ಲ...
ಈಗಿರುವುದೇನಿದ್ದರೂ ಆಗೊಮ್ಮೆ ಈಗೊಮ್ಮೆ ಕೇಳಿಬರುವ ಕಾರಿನ ಹಾರ್ನಿನ ಕರ್ಕಶ ಶಬ್ಧ.....ಅದೂ ಇಲ್ಲದಾಗ ನೀರವ ಮೌನ...ಸ್ವಾರ್ಥಿ ಮನುಷ್ಯ...

Subscribe to:
Comments (Atom)

.jpg)