Sunday, January 18, 2015

Meerkats or Suricate:

ಇವು ಬೋಸ್ಟ್ವಾನದ ಕಲಹರಿ ಮರುಭೂಮಿ, ನಮೀಬಿಯಾದ ನಮೀಬ್ ಮರುಭೂಮಿ, ನೈಋತ್ಯ ಅಂಗೋಲಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕಂಡುಬರುವ ಮುಂಗುಸಿ ಜಾತಿಗೆ ಸೇರಿದ ಮಾಂಸಾಹಾರಿ ಸಸ್ತನಿಗಳು. ಇವು ಕಾಲೋನಿಗಳಲ್ಲಿ, ಅಂದರೆ ಗುಂಪುಗಳಲ್ಲಿ ವಾಸಿಸುವ ಪ್ರಾಣಿಳಾಗಿದ್ದು ಒಂದು ಕಾಲೋನಿ ಸಾಮಾನ್ಯವಾಗಿ 30-50 ಮೀರ್ಕ್ಯಾಟ್ ಗಳನ್ನು ಒಳಗೊಂಡಿರುತ್ತದೆ. ಇವುಗಳ ಪ್ರಮುಖ ಆಹಾರ ಕೀಟಗಳಾದರೂ ಕೆಲವೊಮ್ಮೆ ಹಲ್ಲಿ, ಹಾವು, ಚೇಳು, ಜೇಡ, ಜರಿ,ಇತ್ಯಾದಿಗಳನ್ನೂ ತಿನ್ನುತ್ತವೆ. ಒಂದು ಮೀರ್ಕ್ಯಾಟ್ ತನ್ನ ತೂಕದಷ್ಟೆ ಮರಳನ್ನು ಕೆಲವೇ ಸೆಕೆಂಡುಗಳಲ್ಲಿ ತೋಡಿ ನೆಲದಲ್ಲಿ ಬಿಲಗಳನ್ನು ಮಾಡುವ ಚಾಕಚಕ್ಯತೆ ಹೊಂದಿದ್ದು ಹೀಗೆ ತೋಡಿದ ಬಿಲಗಳಲ್ಲಿ ಅವು ವಾಸಿಸುತ್ತದೆ. ಹಗಲು ವೇಳೆಯಲ್ಲಿ ಮಾತ್ರ ಬಿಲದಿಂದ ಹೊರಬರುವ ಇವು, ಆಹಾರ ಹುಡುಕುವ ಸಂದರ್ಭಗಳಲ್ಲಿ, ಗುಂಪಿನಲ್ಲಿರುವ ಒಂದೆರಡು ಮೀರ್ಕ್ಯಾಟ್ ಗಳು ಗಾರ್ಡ್ ನಂತೆ ಕಾವಲು ಕಾರ್ಯನಿರ್ವಹಿಸುತ್ತಿದ್ದರೆ ಮಿಕ್ಕವು ಆಹಾರ ಹುಡುಕುವಲ್ಲಿ ನಿರತವಾಗಿರುತ್ತವೆ.ಶತ್ರುಗಳನ್ನು ಕಂಡೊಡನೆ ವಿವಿಧ ಶಬ್ಧಗಳ ಮೂಲಕ ಎಚ್ಚರಿಕೆ ನೀಡುವ ಕೆಲಸ ಈ ಗಾರ್ಡ್ ಅಥವಾ ಸೆಂಟ್ರಿಗಳದ್ದು. ಒಂದೊಂದು ಶತ್ರುವಿಗೂ ಪ್ರತ್ಯೇಕ ಶಬ್ಧ ಹೊರಡಿಸುವ ಅದ್ಭುತ ಕಲೆ ಇವುಗಳಿಗಿರುವುದು ಸೋಜಿಗವೇ ಸರಿ.ಸುಮಾರು 35-50 ಸೆ.ಮೀ. ಉದ್ದ, 0.5-2.5 ಕಿ.ಗ್ರಾಂ. ತೂಕವಿರುವ ಇವುಗಳ ಆಯಸ್ಸು ಸೆರೆಯಲ್ಲಿ 12-14 ವರ್ಷ ಹಾಗೂ ಕಾಡಿನಲ್ಲಿ ಕೇವಲ 6-7 ವರ್ಷ ಮಾತ್ರ.

(Source: Wikipedia)
(PC: movies.nationalgeographic.com / www.arkive.org)                                                                                   

Wednesday, January 14, 2015

Shoebill : 

ಪೂರ್ವ ಆಫ್ರಿಕಾದಲ್ಲಿ ಮಾತ್ರ ಕಾಣಬರುವ ಸುಮಾರು 5 ಅಡಿ ಉದ್ದ, 4 ಅಡಿ ಅಗಲದ ದೈತ್ಯಾಕಾರದ ಪಕ್ಷಿಯಿದು.ಇದರ ಕೊಕ್ಕು 'ಶೂ' ಆಕಾರದಲ್ಲಿರುವುದರಿಂದ ಇದಕ್ಕೆ ಶೂಬಿಲ್ ಎಂದು ಹೆಸರು ಬಂದಿದೆ. ಈ ಕೊಕ್ಕು ಸುಮಾರು 9 ಇಂಚು ಉದ್ದ, 4 ಇಂಚು ಅಗಲವಿರುತ್ತದೆ. ವಿವಿಧ ರೀತಿಯ ಮೀನು,ಹಾವು,ಕಪ್ಪೆ,ಹಲ್ಲಿ,ಇಲಿ,ಮೊಸಳೆಯ ಮರಿಗಳು ಇದರ ಆಹಾರ. ತನ್ನ ಆಹಾರಕ್ಕಾಗಿ ಗಂಟೆಗಟ್ಟಲೆ ಪ್ರತಿಮೆಯಂತೆ ಕಾಯುತ್ತಾ ನಿಲ್ಲುವುದರಿಂದ ಇದನ್ನು Statue-like bird ಎಂದೂ ಕರೆಯುತ್ತಾರೆ. ಯಾವಾಗಲೂ ಒಂಟಿಯಾಗಿ ವಾಸಿಸುವ ಇದು ಗುಂಪಿನಲ್ಲಿ ಕಂಡುಬರುವುದಿಲ್ಲ. ಕೇವಲ ಸಂತಾನೋತ್ಪತ್ತಿ ಸಮಯದಲ್ಲಿ ಮತ್ತು ಮರಿ ಹಕ್ಕಿಗಳನ್ನು ಬೆಳೆಸುವ ಸಂದರ್ಭಗಳಲ್ಲಿ  ಮಾತ್ರ ಜೋಡಿಯಲ್ಲಿ ಕಂಡುಬರುತ್ತವೆ. ಇಂತಹ ಸುಂದರ ಅದ್ಭುತ ಪಕ್ಷಿ ಈಗ ವಿನಾಶದಂಚಿಗೆ ಸರಿದಿದ್ದು, ಕಾಡುಗಳಲ್ಲಿ ಇವುಗಳ ಸಂಖ್ಯೆ ಕೇವಲ 5000-8000 ಎಂದು ಅಂದಾಜಿಸಲಾಗಿದೆ.  ಈ ಕ್ಷೀಣಿಸುವಿಕೆಗೆ ಮಾನವನಿಂದ ಇವುಗಳ ವಾಸಸ್ಥಳಗಳ ನಾಶವೇ ಮೂಲ ಕಾರಣವಾಗಿರುವುದು ಖೇದದ ಸಂಗತಿಯಾಗಿದೆ.

(ಕೃಪೆ: ಇಂಟರ್ನೆಟ್)

Sunday, January 11, 2015

Bald Eagle:

ಇದು ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಪಕ್ಷಿ. ಕನ್ನಡದಲ್ಲಿ ಇದನ್ನು ಬಹುಶಃ ಬೋಳು ತಲೆಯ ಹದ್ದು ಎಂದು ಕರೆಯಬಹುದು. ಉತ್ತರ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ಕಾಣಬರುವ ಈ ಪಕ್ಷಿ ಹೆಚ್ಚಾಗಿ ನೀರಿನ ಹೊಂಡಗಳು, ಕೆರೆಕೊಳ್ಳಗಳ ಬಳಿ ವಾಸಿಸುತ್ತದೆ. ತಲೆ ಮತ್ತು ಬಾಲ ಬಿಳಿಯ ಬಣ್ಣದ್ದಾಗಿರುವುದರಿಂದ ಬೋಳಾಗಿಲ್ಲದಿದ್ದರೂ ಬೋಳು
ತಲೆಯ ಹದ್ದು ಎಂಬ ಹೆಸರು ಬಂದಿದೆ. ಈ ಪಕ್ಷಿ ಸಂತಾನೋತ್ಪತ್ತಿ ಕಾಲಕ್ಕೆ ತಾನು ಹುಟ್ಟಿದ ಸ್ಥಳಕ್ಕೇ ಹಿಂದಿರುಗುವುದೊಂದು ಕೌತುಕದ ಸಂಗತಿ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಇದು ಒಮ್ಮೆ ಆರಿಸಿಕೊಂಡ ಸಂಗಾತಿಯೊಡನೆಯೇ ಜೀವನಪರ್ಯಂತ ಇರುತ್ತದೆ. ತನ್ನ ಸಂಗಾತಿ ಸತ್ತಾಗ ಅಥವಾ ಕಾಣೆಯಾದಾಗ ಅಥವಾ ಸಂತಾನೋತ್ಪತ್ತಿಯಲ್ಲಿ ವಿಫಲವಾದಲ್ಲಿ ಮಾತ್ರ ಬೇರೊಂದು ಸಂಗಾತಿಯನ್ನಾಯ್ಕೆ ಮಾಡಿಕೊಳ್ಳುತ್ತದೆ. ಈ ಪಕ್ಷಿಯ ಸಂತತಿ 20ನೇ ಶತಮಾನದ ಮಧ್ಯ ಭಾಗದಲ್ಲಿ ಡಿಡಿಟಿ ರಾಸಾಯನಿಕದ ಹೆಚ್ಚಿನ ಉಪಯೋಗದಿಂದ ತೀವ್ರ ಕುಸಿಯಿತು. ಇದರಿಂದ ಎಚ್ಚೆತ್ತ ಅಮೆರಿಕಾ ಡಿಡಿಟಿಯನ್ನು ಸಂಪೂರ್ಣವಾಗಿ ನಿಷೇಧಿಸಿತು. ಈಗಿನ ಒಂದು ಸಮೀಕ್ಷೆಯ ಪ್ರಕಾರ ಇವುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿರುವುದೊಂದು ಸಂತಸದ ಸಂಗತಿ.
(ಕೃಪೆ: ಇಂಟರ್ನೆಟ್)