ಕೆಂಚಮ್ಮ ಮತ್ತು ಸಂಸಾರ:
ಅವತ್ತು ನಾನು ಆಫೀಸಿನಿಂದ ಸಂಜೆ ಮನೆಗೆ ಬಂದ ಕೂಡಲೇ ಅಮ್ಮ, ‘ಪಕ್ಕದ್ಮನೆ ಕಾಂಪೌಂಡಿನಲ್ಲಿ ಕರಿಯಮ್ಮನ ಮಗಳಿದ್ದಾಳಲ್ಲ ಕೆಂಚಿ ಅದು ಆರು ಮರಿಗಳ್ನ ಹಾಕಿದೆ ಕಣೆ’ ಅಂದ್ರು. ಕರಿಯಮ್ಮ ಮತ್ತು ಕೆಂಚಿ, ಬೀದಿನಾಯಿಗಳಿಗೆ ನಾವುಗಳು ಮಾಡಿರುವ ನಾಮಕರಣ. ಹೋಗಿ ಪಕ್ಕದ ಮನೆ ಕಾಂಪೌಂಡಿನಲ್ಲಿ ನೋಡಿದೆ. ಸೌದೆ ಒಟ್ಟು ಮಾಡಲು ನಾಲ್ಕು ಕಲ್ಲುಗಳನ್ನು ಹೂತಿದ್ದರು. ಆ ಕಲ್ಲುಗಳಡಿಯಲ್ಲಿ ಮುದ್ದಾದ ಆರು ಮರಿಗಳಿದ್ದವು. ಎಲ್ಲಾ ತುಂಬಾ ಆರೋಗ್ಯವಾಗಿದ್ದದ್ದು ನೋಡಿ ಖುಷಿಯಾಯಿತು. ತುಂಬಾ ದಷ್ಟಪುಷ್ಟವಾಗಿದ್ದ ಆ ಮರಿಗಳ ಅಮ್ಮ ಮಾತ್ರ ತುಂಬಾ ಸೊರಗಿತ್ತು. ನಾನು ಅಮ್ಮನಿಗೆ ‘ಕೆಂಚಿಗೆ ಸ್ವಲ್ಪ ತಿನ್ನೋಕೆ ಜಾಸ್ತಿ ಹಾಕಮ್ಮ’ ಅಂದೆ. ಜೋರು ಮಳೆ ಬಂದರೂ ಯಾವುದೇ ಆತಂಕವಿರಲಿಲ್ಲ. ಅಷ್ಟು ಸುರಕ್ಷಿತವಾಗಿ ಬೆಚ್ಚಗಿತ್ತು ಆ ಗೂಡು. ಹೀಗೆ ಮೂರು ನಾಲ್ಕು ದಿನಗಳು ಕಳೆದವು. ಕೆಂಚಿ ಇದ್ದಕ್ಕಿದ್ದಂತೆ ಹೊತ್ತುಗೊತ್ತಿಲ್ಲದೇ ಊಳಿಡಲು ಪ್ರಾರಂಭಿಸಿತು. ನಮಗೆ ಮರಿಗಳಿಗೇನಾದರೂ ಅಪಾಯವಾಗಿದೆಯಾ ಎಂಬ ಭಯ. ಪರೀಕ್ಷಿಸಿದರೆ ಎಲ್ಲಾ ಮರಿಗಳು ಚೆನ್ನಾಗಿಯೇ ಇದ್ದವು. ಆದರೆ ಈ ಕೆಂಚಿಗೆ ಅದೇನು ಹಿಂಸೆಯಾಗುತ್ತಿತ್ತೆಂದು ಮಾತ್ರ ತಿಳಿಯಲಿಲ್ಲ. ಅದು ಊಳಿಡುವುದೂ ನಿಲ್ಲಲಿಲ್ಲ. ಹೀಗೆ ಊಳಿಡುವುದು ಅಪಶಕುನ, ಮರಿಗಳಿದ್ದರಲ್ಲವೆ ಈ ನಾಯಿ ನಮ್ಮ ಮನೆಯ ಮುಂದೆ ಊಳಿಡುವುದು ಎಂದು ಭಾವಿಸಿದ ನಮ್ಮ ಪಕ್ಕದ ಮನೆಯಾಕೆ ಎಲ್ಲಾ ಆರು ಮರಿಗಳನ್ನೂ ಕಾಂಪೌಂಡಿನ ಹಿಂದೆ ಯಾವುದೇ ರಕ್ಷಣೆಯಿಲ್ಲದ ಜಾಗದಲ್ಲಿ ಬಿಟ್ಟುಬಿಟ್ಟಿದ್ದಾರೆ. ಇದು ನಮಗೆ ಒಂದು ದಿನ ತಡವಾಗಿ ತಿಳಿಯಿತು. ಅಲ್ಲಿಗೆ ಒಂದು ರಾತ್ರಿಯಿಡೀ ಮಳೆಗಾಳಿ ಬಿಸಿಲಲ್ಲಿ ಆ ಮರಿಗಳು ದಿನಕಳೆದಿದ್ದವು. ಹಂದಿ, ಇತರೆ ನಾಯಿಗಳು ಇವುಗಳನ್ನು ಏನೂ ಮಾಡದೇ ಇದ್ದುದೇ ಆಶ್ಚರ್ಯದ ಸಂಗತಿ. ಈ ವಿಷಯ ತಿಳಿದ ನಾವು ಆ ಆರೂ ಮರಿಗಳನ್ನೂ ನಮ್ಮ ಮನೆಯ ಹಿತ್ತಲಿನಲ್ಲಿ ತಂದಿರಿಸಿಕೊಂಡೆವು. ಆ ಮರಿಗಳ ತಾಯಿ ದಿನಕ್ಕೊಮ್ಮೆಯಾದರೂ ನಮ್ಮ ಮನೆಯ ಹಿತ್ತಲ ಕಾಂಪೌಂಡ್ ಹಾರಿ ಬಂದು ಹಾಲುಣಿಸಿ ಹೋಗುತ್ತಿತ್ತು. ಅಮ್ಮ ಆ ಮರಿಗಳಿಗೆಂದೇ ಒಂದು ಲೀಟರ್ ಹಾಲು ಹೆಚ್ಚಾಗಿ ತರಿಸುತ್ತಿದ್ದರು. ಹೆಚ್ಚು ಅಕ್ಕಿ ಹಾಕಿ ಅನ್ನ ಮಾಡುತ್ತಿದ್ದರು. ದಿನನಿತ್ಯ ಎರಡು ಹೊತ್ತು ಊಟದ ಜೊತೆಗೆ ಕೆಂಚಮ್ಮ ಆಗಾಗ ಬಂದುಣಿಸುತ್ತಿದ್ದ ಹಾಲು ಇವೆಲ್ಲದರಿಂದ ಮರಿಗಳು ದಷ್ಟಪುಷ್ಟವಾಗಿ ಬೆಳೆಯುತ್ತಿದ್ದವು.
ಒಂದು ರಾತ್ರಿ ಇದ್ದಕ್ಕಿದ್ದಂತೆ ಅಮ್ಮನ ಜೋರು ದನಿ ಕೇಳಿ ಎಚ್ಚರಾಯ್ತು. ಗಡಿಯಾರ 1.30 ತೋರಿಸುತ್ತಿತ್ತು. ಧೋ ಎಂದು ಸುರಿಯುತ್ತಿದ್ದ ಮಳೆ. ಜೊತೆಜೊತೆಗೆ ಗುಡುಗು, ಮಿಂಚು, ಸಿಡಿಲ ಆರ್ಭಟ. ನಾನು ಗಾಬರಿಯಿಂದ ರೂಮಿನಿಂದ ಹೊರ ಬಂದು ನೋಡಿದರೆ ಅಮ್ಮ ಆ ಜೋರು ಮಳೆಯಲ್ಲಿ ಹಿತ್ತಲಿನ ಗಾಢ ಕತ್ತಲೆಯಲ್ಲಿ ಟಾರ್ಚಿನ ಬೆಳಕಿನ ಸಹಾಯದಿಂದ ಮಳೆಯಲ್ಲಿ ನೆನೆಯುತ್ತಾ ಕುಂಯ್ ಗುಡುತ್ತಿದ್ದ ಮರಿಗಳನ್ನು ‘ಎಲ್ಲಿದ್ದೀಯಾ, ಬಾ ಇಲ್ಲಿ’ ಎನ್ನುತ್ತಾ ಒಂದೊಂದು ಮರಿಯನ್ನೂ ಹುಡುಕಿ ನಮ್ಮ ಮನೆಯ ವರಾಂಡದೊಳಕ್ಕೆ ಬಿಡುತ್ತಿದ್ದಾರೆ. ಕೊನೆಗೆ ಎಲ್ಲಾ ಮರಿಗಳನ್ನೂ ಮನೆಯೊಳಗೆ ಬಿಟ್ಟು ಬಾಗಿಲು ಹಾಕಿಕೊಂಡ ಮೇಲೆ ಇಬ್ಬರಿಗೂ ನೆಮ್ಮದಿಯಾಯಿತು. ಅವುಗಳಿಗಾಗಿ ಮಲಗಲು ಹಿತ್ತಲಲ್ಲಿ ಪ್ರತ್ಯೇಕವಾಗಿ ಗೂಡು ಮಾಡಿದ್ದೆವಾದರೂ ಆ ಪುಟ್ಟ ಮರಿಗಳು ಮಳೆಯ ಆರ್ಭಟಕ್ಕೆ ಹೆದರಿ ಗೂಡಿನಿಂದ ಹೊರಬಂದು ಮಳೆಯಲ್ಲಿ ನೆನಯುತ್ತಾ ಕಿರುಚುತಿದ್ದವು.
ಹಿತ್ತಲೆಲ್ಲಾ ನಮ್ಮದೇ ಎಂದು ಬೀಗುತ್ತಿದ್ದ ಬೆಕ್ಕಿನ ಮರಿಗಳಿಗೆ ಈಗ ಹಿತ್ತಲಿನಲ್ಲಿ ಪುಟುಪುಟು ಎಂದು ಓಡಾಡುತ್ತಿದ್ದ ಈ ನಾಯಿಮರಿಗಳನ್ನು ನೋಡಿ ಗಾಬರಿ. ನಮ್ಮ ಮನೆಯ ಕೆಲಸಕ್ಕೆ ಬರುವ ಲಕ್ಷ್ಮಿಗೋ ಈ ಪ್ರಾಣಿ ಪಕ್ಷಿಗಳೆಂದರೆ ಅದೇನೋ ಅಕ್ಕರೆ. ಹಿತ್ತಲೆಲ್ಲಾ ಗುಡಿಸಿ ಶುಭ್ರವಾಗಿಡುತ್ತಿದ್ದುದಲ್ಲದೇ ಅವುಗಳ ಬಟ್ಟಲು ತೊಳೆದು ತಾನೂ ಅನ್ನ ಹಾಕುತ್ತಿದ್ದಳು. ನೋಡ ನೋಡುತ್ತಿದ್ದಂತೆ ತೀವ್ರವಾಗಿ ಬೆಳೆಯಲಾರಂಭಿಸಿದ ಅವುಗಳನ್ನು ನೋಡಿ ಒಂದು ಕಡೆ ಸಂತೋಷ, ಮತ್ತೊಂದು ಕಡೆ ಈ ಮರಿಗಳ ಮುಂದಿನ ಭವಿಷ್ಯ ಏನು ಎಂಬ ಬಗ್ಗೆ ಚಿಂತೆ. ಆ ವೇಳೆಗಾಗಲೆ ಅವುಗಳಮ್ಮ ಆ ಮರಿಗಳ ಬಳಿ ಬರುವುದೂ ಕಡಿಮೆಯಾಗಿತ್ತು. ಯಾವುದಾದರೂ ಪ್ರಾಣಿದಯಾ ಸಂಸ್ಥೆಗೆ ನೀಡಿದರೆ ಹೇಗೆ ಎಂದು ಒಂದಿಡೀ ದಿನ ಅಂತರ್ಜಾಲವನ್ನೆಲ್ಲಾ ಜಾಲಾಡಿದೆ. ಆದರೆ ನಮ್ಮೂರಿನಲ್ಲಿ ಅಂತಹ ಯಾವುದೇ ಸಂಸ್ಥೆ ಇಲ್ಲವೆಂದು ತಿಳಿಯಿತು. ಅವರಿವರ ಬಳಿ ಈ ಮರಿಗಳನ್ನು ಸಾಕಿಕೊಳ್ಳುತ್ತೀರಾ ಎಂದು ಕೇಳಿದ್ದೂ ಆಯಿತು. ಮೊದಮೊದಲು ಉತ್ಸುಕರಾಗಿ ವಿಚಾರಿಸುತ್ತಿದ್ದ ಮಂದಿ ಬೀದಿ ನಾಯಿಯ ಮರಿಗಳೆಂದು ತಿಳಿಯುತ್ತಿದ್ದ ಕೂಡಲೇ ಬೇಡವೆನ್ನುತ್ತಿದ್ದರು. ಕೊನೆಗೆ ಲಕ್ಷ್ಮಿ ತಾನೆರಡು ಮರಿಗಳನ್ನು ಸಾಕಿಕೊಳ್ಳುವುದಾಗಿ ಹೇಳಿ ಎರಡನ್ನು ಕೊಂಡೊಯ್ದಳು. ಮತ್ತೊಬ್ಬರು ಮತ್ತೊಂದು ಮರಿಯನ್ನು ತೆಗೆದುಕೊಂಡು ಹೋದರು. ಉಳಿದ ಮೂರು ಮರಿಗಳನ್ನು ಯಾರೋ ಶ್ರೀಮಂತರು ಕಾರಿನಲ್ಲಿ ಬಂದು ತಮ್ಮ ತೋಟದ ಮನೆಯಲ್ಲಿ ಸಾಕಿಕೊಳ್ಳುವುದಾಗಿ, ಯತೇಚ್ಛವಾಗಿ ಹಾಲು ಲಭ್ಯವಿದ್ದು ನಾವು ಮರಿಗಳ ಬಗ್ಗೆ ಆತಂಕಪಡುವ ಅವಶ್ಯಕತೆಯಿಲ್ಲವೆಂದು ಭರವಸೆ ನೀಡಿ ಕೊಂಡೊಯ್ದರು.
ಅಂತೂ ಇಂತೂ ಕೆಂಚಮ್ಮನ ಸಂಸಾರಕ್ಕೆ ಒಂದು ದಾರಿ ತೋರಿಸಿದ್ದಾಯಿತೆಂದು ನಾನು ಅಮ್ಮ ನಿಟ್ಟುಸಿರಿಟ್ಟೆವು.ಹಿತ್ತಲೆಲ್ಲಾ ನಮ್ಮದೇ ಎಂದು ಬೀಗುತ್ತಿದ್ದ ಬೆಕ್ಕಿನ ಮರಿಗಳಿಗೆ ಈಗ ಹಿತ್ತಲಿನಲ್ಲಿ ಪುಟುಪುಟು ಎಂದು ಓಡಾಡುತ್ತಿದ್ದ ಈ ನಾಯಿಮರಿಗಳನ್ನು ನೋಡಿ ಗಾಬರಿ. ನಮ್ಮ ಮನೆಯ ಕೆಲಸಕ್ಕೆ ಬರುವ ಲಕ್ಷ್ಮಿಗೋ ಈ ಪ್ರಾಣಿ ಪಕ್ಷಿಗಳೆಂದರೆ ಅದೇನೋ ಅಕ್ಕರೆ. ಹಿತ್ತಲೆಲ್ಲಾ ಗುಡಿಸಿ ಶುಭ್ರವಾಗಿಡುತ್ತಿದ್ದುದಲ್ಲದೇ ಅವುಗಳ ಬಟ್ಟಲು ತೊಳೆದು ತಾನೂ ಅನ್ನ ಹಾಕುತ್ತಿದ್ದಳು. ನೋಡ ನೋಡುತ್ತಿದ್ದಂತೆ ತೀವ್ರವಾಗಿ ಬೆಳೆಯಲಾರಂಭಿಸಿದ ಅವುಗಳನ್ನು ನೋಡಿ ಒಂದು ಕಡೆ ಸಂತೋಷ, ಮತ್ತೊಂದು ಕಡೆ ಈ ಮರಿಗಳ ಮುಂದಿನ ಭವಿಷ್ಯ ಏನು ಎಂಬ ಬಗ್ಗೆ ಚಿಂತೆ. ಆ ವೇಳೆಗಾಗಲೆ ಅವುಗಳಮ್ಮ ಆ ಮರಿಗಳ ಬಳಿ ಬರುವುದೂ ಕಡಿಮೆಯಾಗಿತ್ತು. ಯಾವುದಾದರೂ ಪ್ರಾಣಿದಯಾ ಸಂಸ್ಥೆಗೆ ನೀಡಿದರೆ ಹೇಗೆ ಎಂದು ಒಂದಿಡೀ ದಿನ ಅಂತರ್ಜಾಲವನ್ನೆಲ್ಲಾ ಜಾಲಾಡಿದೆ. ಆದರೆ ನಮ್ಮೂರಿನಲ್ಲಿ ಅಂತಹ ಯಾವುದೇ ಸಂಸ್ಥೆ ಇಲ್ಲವೆಂದು ತಿಳಿಯಿತು. ಅವರಿವರ ಬಳಿ ಈ ಮರಿಗಳನ್ನು ಸಾಕಿಕೊಳ್ಳುತ್ತೀರಾ ಎಂದು ಕೇಳಿದ್ದೂ ಆಯಿತು. ಮೊದಮೊದಲು ಉತ್ಸುಕರಾಗಿ ವಿಚಾರಿಸುತ್ತಿದ್ದ ಮಂದಿ ಬೀದಿ ನಾಯಿಯ ಮರಿಗಳೆಂದು ತಿಳಿಯುತ್ತಿದ್ದ ಕೂಡಲೇ ಬೇಡವೆನ್ನುತ್ತಿದ್ದರು. ಕೊನೆಗೆ ಲಕ್ಷ್ಮಿ ತಾನೆರಡು ಮರಿಗಳನ್ನು ಸಾಕಿಕೊಳ್ಳುವುದಾಗಿ ಹೇಳಿ ಎರಡನ್ನು ಕೊಂಡೊಯ್ದಳು. ಮತ್ತೊಬ್ಬರು ಮತ್ತೊಂದು ಮರಿಯನ್ನು ತೆಗೆದುಕೊಂಡು ಹೋದರು. ಉಳಿದ ಮೂರು ಮರಿಗಳನ್ನು ಯಾರೋ ಶ್ರೀಮಂತರು ಕಾರಿನಲ್ಲಿ ಬಂದು ತಮ್ಮ ತೋಟದ ಮನೆಯಲ್ಲಿ ಸಾಕಿಕೊಳ್ಳುವುದಾಗಿ, ಯತೇಚ್ಛವಾಗಿ ಹಾಲು ಲಭ್ಯವಿದ್ದು ನಾವು ಮರಿಗಳ ಬಗ್ಗೆ ಆತಂಕಪಡುವ ಅವಶ್ಯಕತೆಯಿಲ್ಲವೆಂದು ಭರವಸೆ ನೀಡಿ ಕೊಂಡೊಯ್ದರು.


.jpg)





