Wednesday, February 4, 2015

Regal Horned Lizard:  

ಇದು ನೋಡಲು ಕಪ್ಪೆಯಂತೆ ಕಂಡರೂ ಹಲ್ಲಿಯ ಜಾತಿಗೆ ಸೇರಿದ ಸರೀಸೃಪ. ಮೆಕ್ಸಿಕೊ ಮತ್ತು ನೈಋತ್ಯ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಹೆಚ್ಚಾಗಿ ಕಾಣಬರುವ ಇದರ ಮುಖ್ಯ ಆಹಾರ ಇರುವೆ, ಜೇಡ, ಹುಳು ಹುಪ್ಪಟೆ. ಒಂದು ಹೊತ್ತಿನ ಆಹಾರವಾಗಿ ಸುಮಾರು 2500 ಇರುವೆಗಳನ್ನು ಇದು ತಿನ್ನುತ್ತದೆ. ಇದರ ಒಂದು ವೈಶಿಷ್ಟ್ಯವೆಂದರೆ ಬೆಕ್ಕು, ನಾಯಿ, ನರಿ ಮುಂತಾದ ಪ್ರಾಣಿಗಳಿಂದ ಇದು ದಾಳಿಗೊಳಗಾದಾಗ  ತನ್ನ ಕಣ್ಣಿನಿಂದ ಪಿಚಕಾರಿಯಂತೆ ನೆತ್ತರನ್ನು ಶತ್ರುವಿಗೆ ಗುರಿಯಿಟ್ಟು ಯಾವ ಶಾರ್ಪ್ ಶೂಟರ್ಗೂ ಕಡಿಮೆಯಿಲ್ಲದಂತೆ ಸುಮಾರು 4 ಅಡಿಯಷ್ಟು ದೂರಕ್ಕೆ ಹಲವು ಬಾರಿ ಚಿಮ್ಮಿಸುತ್ತದೆ.. !! ಈ ನೆತ್ತರ ರುಚಿ ಕೆಟ್ಟದಾಗಿದ್ದು ಶತ್ರು ಅಸಹ್ಯಿಸಿಕೊಂಡು ದಾಳಿಮಾಡುವುದನ್ನು ಬಿಟ್ಟು ಹಿಂದಿರುಗುವಂತೆ ಮಾಡುತ್ತದೆ. ಹೀಗೆ ನೆತ್ತರು ಚಿಮ್ಮಲು ಕಾರಣವೇನೆಂದರೆ, ಅದರ ತಲೆಯ ಭಾಗದಲ್ಲಿ ಶೇಖರಗೊಳ್ಳುವ ರಕ್ತ, ದೇಹದ ಇತರ ಭಾಗಗಳಿಗೆ ಸರಬರಾಜಾಗುತ್ತದೆ. ಆದರೆ ಶತ್ರು ದಾಳಿ ಮಾಡಿದಾಗ ತಲೆಯಿಂದ ರಕ್ತ ಇತರ ಭಾಗಗಳಿಗೆ ಹರಿಯದಂತೆ ತಡೆಹಿಡಿದು, ಇದು ಕಣ್ಣಿನಲ್ಲಿನ ರಂದ್ರದಿಂದ ಹೊರಬರುವಂತೆ ಮಾಡುತ್ತದೆ.
(Source: Internet)





Sunday, February 1, 2015


Albatross


ದಕ್ಷಿಣ ಮಹಾಸಾಗರ ಮತ್ತು ಉತ್ತರ ಪೆಸಿಫಿಕ್ ಸಮುದ್ರಗಳಲ್ಲಿ ಕಂಡುಬರುವ, ಹಾರುವ ಹಕ್ಕಿಗಳಲ್ಲೇ ಅತ್ಯಂತ ದೈತ್ಯ ಕಡಲಹಕ್ಕಿಯಿದು. ಇವುಗಳಲ್ಲಿ ಹಲವು ಉಪಜಾತಿಗಳಿದ್ದು,  ಪ್ರೌಢ  ಗ್ರೇಟ್ ಆಲ್ಬೆಟ್ರೋಸ್ ಹಕ್ಕಿಯ ರೆಕ್ಕೆಗಳು(ಒಂದು ರೆಕ್ಕೆಯ ತುದಿಯಿಂದ ಮತ್ತೊಂದು ರೆಕ್ಕೆಯ ತುದಿಯವರೆಗೆ) 13 ಮೀಟರ್ ಇರುತ್ತದೆ...!!  ಈ ದೈತ್ಯ ರೆಕ್ಕೆಗಳಿಂದ, ಅವುಗಳು  ಒಮ್ಮೆಯೂ ರೆಕ್ಕೆ ಬಡಿಯದೆ, ದಿನಗಟ್ಟಲೆ ವಿಶ್ರಾಂತಿಯಿಲ್ಲದೆ, ಸಾಗರದ ಮೇಲೆ ತೇಲುತ್ತಾ ಸಾಗುತ್ತವೆ. ಉಪ್ಪುನೀರನ್ನೇ ಸೇವಿಸುವ ಇವುಗಳ ಆಹಾರ ಸ್ಕ್ವಿಡ್ಸ್, ಮೀನು, ಪುಟ್ಟ ಕಡಲಕಳೆ ಚಿಪ್ಪು ಜೀವಿಗಳು(krill). ನೆಲದ ಮೇಲೆ ಕೇವಲ ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಕಾಣಬರುವ ಇವುಗಳ ಆಯಸ್ಸು ಸುಮಾರು 60 ವರ್ಷ. ಕೆಲವು ದಾಖಲೆಗಳ ಪ್ರಕಾರ 70 ವರ್ಷಗಳವರೆಗೆ ಬದುಕಿದ ಉದಾಹರಣೆಗಳೂ ಇವೆ. ಸಾಮಾನ್ಯವಾಗಿ ಒಂಟಿಯಾಗಿರುವ ಇವು ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ನಿರ್ಜನ ದ್ವೀಪ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಕಾಲೋನಿಗಳಲ್ಲಿ  ಒಟ್ಟುಗೂಡುತ್ತವೆ. ಇಂತಹ ಕಾಲೋನಿಗಳು ಸುಮಾರು 2 1/2 ಮೈಲಿಗಳಷ್ಟು ವಿಸ್ತಾರದಲ್ಲಿ ಹರಡಿಕೊಂಡಿರುತ್ತದೆ. ಹುಟ್ಟಿನ ಹತ್ತು ವರ್ಷದ ಬಳಿಕ ಪ್ರೌಢಾವಸ್ತೆಯನ್ನು ತಲುಪುತ್ತವೆ. ಒಮ್ಮೆ ಸಂತಾನೋತ್ಪತ್ತಿಗಾಗಿ ಒಂದುಗೂಡಿದ ಜೋಡಿ ಹಕ್ಕಿಗಳು ಅವುಗಳ ಇಡೀ ಜೀವಿತಾವಧಿಯಲ್ಲಿ ಬೇರೆ ಹಕ್ಕಿಯೊಂದಿಗೆ ಬೆರೆಯುವುದಿಲ್ಲ. ಜೋಡಿ ರಾಯಲ್ ಆಲ್ಬೆಟ್ರೋಸ್ ಪಕ್ಷಿಗಳು ಸುಮಾರು 50 ವರ್ಷಗಳಷ್ಟು ದೀರ್ಘ ಕಾಲ ಒಟ್ಟಿಗೆ ಬದುಕಿದ್ದ ದಾಖಲೆಯಿದೆ.  ಒಮ್ಮೆಗೆ ಒಂದು ಮೊಟ್ಟೆಯನ್ನಷ್ಟೆ ಇಡುವ ಇವು, ಆ ಮೊಟ್ಟೆಯನ್ನು ಸರದಿಯಲ್ಲಿ ಕಾಯುತ್ತವೆ. ಆಕಸ್ಮಿಕವಾಗಿ ಮೊಟ್ಟೆ ಕಳ್ಳತನವಾದಲ್ಲಿ ಅಥವಾ ಮರಿಹಕ್ಕಿ ಮರಣಹೊಂದಿದಲ್ಲಿ ಈ ಜೋಡಿ ಹಕ್ಕಿ ಒಂದು ವರ್ಷದವರೆವಿಗೆ ಮತ್ತೆ ಒಂದುಗೂಡುವುದಿಲ್ಲ. ಸುಮಾರು ಒಂದರಿಂದ ಮೂರು ತಿಂಗಳ ನಂತರ ಮೊಟ್ಟೆಯೊಡೆದು ಹೊರಬರುವ ಮರಿಹಕ್ಕಿಯ ಲಾಲನೆಪಾಲನೆಯನ್ನು ಸಹಾ ಎರಡೂ ಹಕ್ಕಿಗಳೂ ಹೊರುತ್ತವೆ. ಈ ಹಕ್ಕಿಗಳು ಮೀನು ಇತ್ಯಾದಿ ಆಹಾರವನ್ನು ತಿಂದ ನಂತರ  ಆ ಆಹಾರ  ಜೀರ್ಣವಾಗಿ ಎಣ್ಣೆಯಂತಹ ಪ್ರೋಟೀನ್ ಯುಕ್ತ ಕೊಬ್ಬಿನ ಅಂಶವನ್ನು ಉತ್ಪತ್ತಿ ಮಾಡುತ್ತವೆ. ಆ ಎಣ್ಣೆಯನ್ನೇ ಮರಿಗಳಿಗೆ ಕೊಕ್ಕಿನ ಮೂಲಕ ಕಕ್ಕುವ ಮೂಲಕ ಉಣಬಡಿಸುತ್ತವೆ.. ಸುಮಾರು 3-10 ತಿಂಗಳಲ್ಲಿ ಈ ಮರಿ ಹಕ್ಕಿಗಳು ಸ್ವತಂತ್ರವಾಗಿ ಹಾರಲು ಪ್ರಾರಂಭಿಸುತ್ತವೆ. ಒಂದುಗೂಡಿ ಸಂತಾನೋತ್ಪತ್ತಿ ಮಾಡಿ ಮರಿಗಳು ಸ್ವತಂತ್ರವಾಗಿ ಹಾರಲು ಪ್ರಾರಂಭಿಸುವವರೆಗಿನ ಅವಧಿ ಸರಿಸುಮಾರು ಒಂದು ವರ್ಷ..!! ಪ್ರಥಮವಾಗಿ ಸಮುದ್ರದ ಮೇಲೆ ಹಾರಲು ಪ್ರಾರಂಭಿಸಿದ ಮರಿಹಕ್ಕಿ ನಂತರ 4-5 ವರ್ಷಗಳ ಕಾಲ ನೆಲಕ್ಕೆ ಹಿಂದಿರುಗುವುದಿಲ್ಲ, ಸಮುದ್ರದ ಮೇಲೆಯೇ ಕಾಲ ಕಳೆಯುತ್ತದೆ. ಒಂದು ಆಲ್ಬೆಟ್ರೋಸ್ ಹಕ್ಕಿ ತನ್ನ ಜೀವಿತಾವಧಿಯಲ್ಲಿ 30 ಲಕ್ಷ ಮೈಲಿಗೂ ಅಧಿಕ ಹಾರಾಟ ನಡೆಸುತ್ತದೆ. ಮೀನುಗಾರರಿಂದ ಹಾಗೂ ಸಮುದ್ರಕ್ಕೆ ಬಿಸುಟುವ ಪ್ಲಾಸ್ಟಿಕ್ ವಸ್ತುಗಳಿಂದ ಈ ಪಕ್ಷಿಗಳಿಗೆ ಅಪಾರ ಹಾನಿ ಸಂಭವಿಸುತ್ತಿದ್ದು ಇವುಗಳ ಒಟ್ಟಾರೆ ಸಂಖ್ಯೆ ಇಳಿಮುಖವಾಗುತ್ತಿದೆ.

(ಕೃಪೆ: ಇಂಟರ್ನೆಟ್)